Link copied!
Sign in / Sign up
15
Shares

ಪ್ರೆಗ್ನನ್ಸಿಯ ಪ್ರತಿ ತಿಂಗಳನ್ನೂ ಹೇಗೆ ನಿಭಾಯಿಸಬೇಕು ಎಂಬುದರ ಕೈಪಿಡಿ

ಗರ್ಭಾವಸ್ಥೆ ಹೆಣ್ಣಿನ ಜೀವನದ ಅತೀ ಮುಖ್ಯ ಘಟಕ ಎಂದರೆ ತಪ್ಪಾಗುವುದಿಲ್ಲ. ಭಯ, ಆತಂಕದೊಂದಿಗೆ ಸಂತೋಷವನ್ನು ತನ್ನ ಮನಸ್ಸಿನ್ನಲ್ಲಿ ಇಟ್ಟುಕೊಂಡು ಗರ್ಭಿಣಿ ತನ್ನ ಮಗುವಿನ ಬಗ್ಗೆ ಕನಸುಗಳನ್ನು ಕಾಣಲು ಪ್ರಾರಂಭಿಸುತ್ತಾಳೆ. ತಾಯಿ, ಅತ್ತೆ, ಸ್ನೇಹಿತೆ, ನೆರೆ ಹೊರೆಯವರ  ಸಲಹೆ, ಅಭಿಪ್ರಾಯವನ್ನು ಅನುಸರಿಸಿ ತನ್ನ ಗರ್ಭಾವಸ್ಥೆಯಲ್ಲಿ ಹೇಗೆ ತನ್ನನು ತಾನು ನೋಡಿಕೊಳ್ಳಬೇಕು ಎಂದು ಕಲಿಯುತ್ತಾಳೆ. ವೈದ್ಯರು ಹೇಳಿರುವ ಮಾತ್ರೆಗಳು, checkup ಎಲ್ಲವನ್ನು ಚಾಚು ತಪ್ಪದೆ ಪಾಲಿಸಿದರೂ, ಮನಸ್ಸಿನ ಒಂದು ಮೂಲೆಯಲ್ಲಿ ಒಂದು ರೀತಿಯ ಆತಂಕ ಮಾತ್ರ ಹಾಗೆ ಉಳಿದಿರುತ್ತದೆ. ನಿಮ್ಮ ಒಂಬತ್ತು ತಿಂಗಳ ಗರ್ಭಾವಸ್ಥೆಯನ್ನು ಸುಲಭಗೊಳಿಸಲು ನಮ್ಮದೊಂದು ಚಿಕ್ಕ ಪ್ರಯತ್ನವಿದು. ತಿಂಗಳಿನ ಆಧಾರದ ಮೇಲೆ ನೀವು ಅನುಸರಿಸಬೇಕಾದ ದಿನಚರಿಯನ್ನು ತಿಳಿಯಬೇಕೇ? ಹಾಗಾದರೆ, ಮುಂದೆ ಓದಿ.


೧. ಮೊದಲ ತಿಂಗಳು- ನಿಮ್ಮ ಪ್ರಯಾಣ ಆರಂಭವಾಗಿದೆ

ಮೊದಲ ತಿಂಗಳ ಗರ್ಭಾವಸ್ಥೆ ಹೇಗಿರುತ್ತದೆಂದರೆ, ಗೊತ್ತಿರದ ಊರಿನೊಳಗೆ ನಿಮ್ಮ ಪ್ರಯಾಣವಿದ್ದಂತೆ. ದೇಹದ ಸುಸ್ತು, ವಾಂತಿ ಬಂದ ಅನುಭವವನ್ನು ತಡೆಯಬೇಕಾದರೆ ನೀವು ಪೌಷ್ಟಿಕ ಆಹಾರ, ಹಣ್ಣು ಹಂಪಲನ್ನು ಸಾಕಷ್ಟು ಸೇವಿಸಬೇಕು. ಮದ್ಯಪಾನ, ಕಾಫಿ, ಟೀ, ತಂಪು ಪಾನಿಯಗಳಿಂದ ದೂರವಿರಬೇಕು. ಹೆಚ್ಚಿನ ಪ್ರಮಾಣದ ನೀರನ್ನು ಸೇವಿಸಬೇಕು ಜೊತೆಗೆ ಉತ್ತಮ ನಿದ್ರೆಯನ್ನು ಮಾಡಬೇಕು. ಇದಲ್ಲದೆ ಉತ್ತಮ ಅಭ್ಯಾಸಗಳಾದ ವ್ಯಾಯಾಮ, ಯೋಗಾಸನ ಮಾಡುವುದನ್ನು ಮರೆಯದಿರಿ.


೨. ಎರಡನೆ ತಿಂಗಳು- ವಿಚಿತ್ರ ಅನುಭವಗಳ ತಿಂಗಳು

ಹೆಚ್ಚಾದ ಆಯಾಸ, ಮೈ-ಕೈ ನೋವು, ಮಾನಸಿಕ ಆತಂಕ ಇವೆಲ್ಲವೂ ಬೆಳೆಯುತ್ತಿರುವ ನಿಮ್ಮ ಕಂದಮ್ಮಗಳ ಪರಿಣಾಮದಿಂದ. ಇದಕ್ಕೆ ನೀವು ಆದಷ್ಟು ವಿಶ್ರಾಂತಿಯನ್ನು ಪಡಿಯಿರಿ. ಆನಾರೋಗ್ಯಕರ ಆಹಾರಗಳನ್ನು ಯಾವುದೇ ಕಾರಣಕ್ಕೂ ಸೇವಿಸಬೇಡಿ. ಪ್ರತಿನಿತ್ಯ ಚಟುವಟಿಕೆಯಿಂದ ಇರುವುದರಿಂದ, ಮಗುವಿನ ಬೆಳವಣಿಗೆಗೆ ಮತ್ತಷ್ಟು ಸಹಾಯವಾಗುತ್ತದೆ.


೩. ಮೂರನೇ ತಿಂಗಳು-ಆತಂಕದ ಭಾವನೆಗಳು ನಿಮ್ಮ ಮನಸ್ಸಿನಲ್ಲಿ ಹೆಚ್ಚಾಗುತ್ತದೆ

ನಿಮ್ಮ ಮೊದಲ ತ್ರೈಮಾಸಿಕದ ಕೊನೆಯ ತಿಂಗಳಿನಲ್ಲಿ ನಿಮ್ಮ ದೇಹವು ಹೆಚ್ಚಿನ ಬದಲಾವಣೆಯನ್ನು ಹೊಂದುತ್ತದೆ. ಮೂರನೇ ತಿಂಗಳಿನಲ್ಲಿ ನಿಮ್ಮ ತೂಕ, ರಕ್ತದ ಒತ್ತಡ ಬಗ್ಗೆ ಹೆಚ್ಚು ಗಮನವಹಿಸಿ. ಕಷ್ಟದ ಕೆಲಸಗಳನ್ನು ಮಾಡುವುದನ್ನು ನಿಲ್ಲಿಸಿ ಹಾಗು ವೈದ್ಯರನ್ನು ಭೇಟಿ ಮಾಡುವುದನ್ನು  ಮರೆಯದಿರಿ.


೪. ನಾಲ್ಕನೇ ತಿಂಗಳು- ಹೆಚ್ಚು ಗಮನ ವಹಿಸಬೇಕಾದ ತಿಂಗಳು

ಈಗ ನೀವು, ನಿಮ್ಮ ಎರಡನೆ ತ್ರೈಮಾಸಿಕದ ಮೊದಲ ತಿಂಗಳಿನಲ್ಲಿ ಇರುವಿರಿ. ನಿಮ್ಮ ಮಾಂಸ ಖಂಡ, ಚರ್ಮ ಎಲ್ಲವು ಬದಲಾವಣೆ ಹೊಂದುತ್ತಿರುತ್ತದೆ. ಪ್ರಸೂತಿ ತಜ್ಞರ ಬಳಿ ಆಗಾಗ ಹೋಗುವದನ್ನು ಮರೆಯದಿರಿ. ಇಲ್ಲಿಂದ, ನಿಮ್ಮ ಗರ್ಭಾವಸ್ಥೆಯ ಅನುಭವಗಳನ್ನು ಹೆಚ್ಹಾಗಿ ಕಾಣಲು ಸಾಧ್ಯವಾಗುತ್ತದೆ. ಸರಿಯಾದ ಸಮಯಕ್ಕೆ ಆಹಾರ ಸೇವಿಸುವುದು, ನಿದ್ರೆ ಮಾಡುವುದರ ವೇಳಾಪಟ್ಟಿಯನ್ನು ನಿಗಧಿ ಪಡಿಸಿಕೊಳ್ಳಿ.


೫. ಐದನೇ ತಿಂಗಳು-ನಿಮ್ಮ ಹೊಟ್ಟೆಯು ಎದ್ದು ಕಾಣಲು ಪ್ರಾರಂಭಿಸುತ್ತದೆ

ಹೌದು, ನೀವು ಗರ್ಭಿಣಿ ಎಂದು ಯಾರ ಬಳಿಯೂ ಹೇಳುವ ಅಗತ್ಯವಿಲ್ಲ. ನಿಮ್ಮ ಹೊಟ್ಟೆಯೇ ಎಲ್ಲವನ್ನು ತಿಳಿಸುತ್ತದೆ. ನಿಮ್ಮ ಹೊಟ್ಟೆಯ ಗಾತ್ರ ಹೆಚ್ಚಾಗಿ, ನಿಮ್ಮ ದೇಹದ ತೂಕ ಕೂಡ ಹೆಚ್ಚಾಗುತ್ತದೆ. ಭಾರವನ್ನು ಎತ್ತಲೇ ಬಾರದು, ಇದರೊಂದಿಗೆ ನಾರಿನಾಂಶ ಹೆಚ್ಚಿರುವ ಆಹಾರವನ್ನು ಸೇವಿಸುವುದನ್ನು ಮರೆಯದಿರಿ. ಇದರೊಂದಿಗೆ ಸರಿಯಾದ ಭಂಗಿಯನ್ನು ಅಳವಡಿಸಿಕೊಳ್ಳಿ, ಇಲ್ಲವಾದಲ್ಲಿ ನಿಮಗೆ ಸೊಂಟ ನೋವು ಬರುವುದು ಖಂಡಿತ.


೬. ಆರನೇ ತಿಂಗಳು-ನಿಮಗೆ ನಿಜವಾದ ಗರ್ಭಾವಸ್ಥೆಯ ಅನುಭವಾಗುತ್ತದೆ

ಹೆಚ್ಚು ಹಸಿವಾಗುತ್ತದೆ ಹಾಗು ಮತ್ತಷ್ಟು ಆಯಾಸ ಜಾಸ್ತಿಯಾಗುತ್ತದೆ. ಹೊಟ್ಟೆಯ ಮೇಲೆ ತುರಿಕೆಯ ಅನುಭವಾಗುತ್ತದೆ ಹಾಗು ಮಲಬದ್ದತೆಯ ಲಕ್ಷಣಗಳು ಸಹ ಕಂಡು ಬರುತ್ತದೆ. ಈ ತಿಂಗಳಿನಲ್ಲಿ ನಿಮ್ಮ ಮನಸ್ಸು ಹೆಚ್ಚು ವಿಚಲಿತಗೊಂಡಿರುವುದರಿಂದ ನೀವು ಪ್ರಾಣಯಾಮ, ಯೋಗಾಭ್ಯಾಸ ಮಾಡುವುದು ಸೂಕ್ತವೆಂದು ವೈದ್ಯರು ಹೇಳುತ್ತಾರೆ.


೭. ಏಳನೇ ತಿಂಗಳು-ಮತ್ತಷ್ಟು ದೊಡ್ಡದಾದ ನಿಮ್ಮ ಹೊಟ್ಟೆ

ಮೂರನೇ ತ್ರೈಮಾಸಿಕದ ಮೊದಲ ತಿಂಗಳಿನಲ್ಲಿ, ನಿಮಗೆ ಹೆಚ್ಚು ಕೋಪ ಬರುವುದು, ಕಿರಿ-ಕಿರಿಯನ್ನಿಸುವ  ಅನುಭವಗಳು ಜಾಸ್ತಿಯಾಗುತ್ತವೆ. ಹೊಟ್ಟೆ ನೋವು ಹಾಗು ಯೋನಿಯ contractionಗಳು ಕಂಡುಬರುತ್ತದೆ. ಆಗಾಗ ವೈದ್ಯರ ಬಳಿ ಹೋಗಬೇಕು, ನಿಮ್ಮ ಮಗುವಿನ ಬೆಳವಣಿಗೆ ಹಾಗು ನಿಮ್ಮ ಆರೋಗ್ಯದ ಬಗ್ಗೆ ವೈದ್ಯರಿಂದ ಕೇಳಿ ತಿಳಿಯಿರಿ. ನೀವು ಹೆಚ್ಚಿನ ಪ್ರಮಾಣದ ಕಬ್ಬಿಣಾಂಶ ಹೆಚ್ಚಿರುವ ಆಹಾರವನ್ನು ಸೇವಿಸಬೇಕು, ಜೊತೆಗೆ ನೀವು ಮಲಗುವ ಭಂಗಿಯನ್ನು ಸಹ ಬದಲಾಯಿಸಬೇಕು.


೮. ಎಂಟನೇ ತಿಂಗಳು- ಪ್ರಸವದ ಸಿದ್ಧತೆಯ ಸಮಯ

ಈ ತಿಂಗಳಿನಲ್ಲಿ ನಿಮಗೆ ಮಲಬದ್ದತೆ ಹೆಚ್ಚಾಗಿರುತ್ತದೆ ಹಾಗು ಪೂರ್ಣ ಪ್ರಮಾಣದ ಗರ್ಭಿಣಿಯ ರೀತಿ ಕಾಣಿಸುವಿರಿ. ಈ ತಿಂಗಳಿನಲ್ಲಿ ನಿಮ್ಮ ಮನಸ್ಸಿನ ಒತ್ತಡ ಹೆಚ್ಚಾಗಿ, ನೀವು ಪ್ರಸವದ ಭಯದಲ್ಲಿ ಕಳೆಯುವಿರಿ. ಹೀಗಾಗಬಾರದೆಂದರೆ, ನಿಮ್ಮೊಂದಿಗೆ ನಿಮ್ಮ ತಾಯಿಯನ್ನು ಇರಿಸಿಕೊಳ್ಳಿ, ಅವರಿಗಿಂತ ಒಳ್ಳೆಯ ಸ್ನೇಹಿತರಿಲ್ಲ. ಭಯಗೊಳ್ಳುವ ಅಗತ್ಯವಿಲ್ಲ. ಸರಿಯಾದ ಸಮಯಕ್ಕೆ ನಿದ್ದೆ, ಆಹಾರವನ್ನು ಸೇವಿಸಿ ಮನಸ್ಸನ್ನು ಸಂತೋಷವಾಗಿ ಇಟ್ಟುಕೊಳ್ಳಿ.


೯. ಒಂಬತ್ತನೇ ತಿಂಗಳು-ಪ್ರಸವದ ತಿಂಗಳು

ಇದು ನಿಮ್ಮ ಗರ್ಭಾವಸ್ಥೆಯ ಕೊನೆಯ ತಿಂಗಳು. ಯಾವುದೇ, ಆತಂಕಕ್ಕೆ ಒಳಗಾಗದೆ ನಿಮ್ಮ ಮಗುವಿಗೆ ಬೇಕಾದ ಬಟ್ಟೆ-ಬರೆಗಳನ್ನು ಸಿದ್ದಪಡಿಸಿಕೊಳ್ಳಿ, ಜೊತೆಗೆ ನಿಮ್ಮ ಬಟ್ಟೆಗಳು, ನಿಮಗೆ ಬೇಕಾದ ಸಾಮಗ್ರಿಗಳನ್ನು ಒಂದು ಬ್ಯಾಗಗೆ ಹಾಕಿ ಮೊದಲೇ ಸಿದ್ದ ಪಡಿಸಿಕೊಳ್ಳಿ. ಯಾವುದೇ ರೀತಿಯ ಭಯ ಆತಂಕವಿಲ್ಲದೆ ಆಸ್ಪತ್ರೆಗೆ ಹೋಗಿ, ನಿಮ್ಮ ಮುದ್ದು ಕಂದಮ್ಮನನ್ನು ಬರ ಮಾಡಿಕೊಳ್ಳಿ.

ಮಗು ಹುಟ್ಟಿದ ಘಳಿಗೆ, ನಿಮಗೆ ಮರು ಜೀವ ಬಂದಂತಾಗುತ್ತದೆ. ನಿಮ್ಮ ಜೀವನ ಸಾರ್ಥಕವಾದ ಅನುಭವನ್ನು, ಸಿಹಿ ಕ್ಷಣಗಳನ್ನು ಅನುಭವಿಸಿ ನಿಮ್ಮ ಮುದ್ದು ಕಂದಮ್ಮನನ್ನು ಮನೆಗೆ ಬರಮಾಡಿಕೊಳ್ಳಿ. ಎಲ್ಲ ಗರ್ಭಿಣಿಯರಿಗೆ, ಸುಲಭ ಹಾಗು ಆರೋಗ್ಯಕರ ಪ್ರಸವಾಗಲಿ ಎಂದು ನಮ್ಮ ತಂಡದವರಿಂದ ಶುಭ ಹಾರೈಸುತ್ತಿದ್ದೇವೆ.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon