Link copied!
Sign in / Sign up
13
Shares

ಈ 5 ಕೆಲಸಗಳನ್ನ ಮಾಡದಿದ್ದರೆ ನೀವು ಒಳ್ಳೆ ತಾಯಿ ಆಗಲು ಸಾಧ್ಯವೇ ಇಲ್ಲ!

ನೀವು ಈಗ ಒಳ್ಳೆ ಒಬ್ಬ ತಾಯಿ/ತಂದೆ ಆಗಿದ್ದೀರಾ ಎಂಬುದನ್ನು ಹೇಗೆ ತಿಳಿಯೋದು?


ಪೋಷಕರದ್ದು ಜಗತ್ತಿನ ಅತ್ಯಂತ ಕಷ್ಟಕರ ಕೆಲಸಗಳಲ್ಲಿ ಒಂದು. ಅಲ್ಲದೆ, ಪೋಷಕರು ಎಂದರೆ ಹೀಗೆಯೇ ಇರಬೇಕು, ಇದನ್ನೇ ಮಾಡಬೇಕು ಎಂಬ ಪಟ್ಟಿಯನ್ನು ಮಗು ಮಾಡಿಕೊಂಡ ತಕ್ಷಣ ಯಾರೂ ತಂದು ಕೈಗಿಡುವುದಿಲ್ಲ. ಹೀಗಾಗಿ ನಿಮ್ಮ ಮಗುವಿಗೆ ಅಗತ್ಯ ಇರುವುದನ್ನೆಲ್ಲಾ ಒದಗಿಸುವಂತಹ ಉತ್ತಮ ಪೋಷಕರಾಗುವುದು ಹೇಗೆ ಎಂದು ಯೋಚಿಸುವುದು ಸಹಜವೇ. (ವಾಸ್ತವದಲ್ಲಿ, ಇನ್ನಷ್ಟು ಉತ್ತಮ ಪೋಷಕರಾಗುವುದು ಹೇಗೆ ಎಂಬುದು ತಿಳಿದಿಕೊಳ್ಳಲು ನೀವು ಆಸಕ್ತಿ ತೋರಿಸುತ್ತಿರುವುದೇ ನೀವು ಉತ್ತಮ ಪೋಷಕರು ಎಂಬುದನ್ನು ತೋರಿಸುತ್ತದೆ!)


ಸಿಹಿ ಸುದ್ದಿ ಏನೆಂದರೆ ಈಗ ನಮ್ಮ ಮಕ್ಕಳು ಅವರಿಗೆ ಏನು ಬೇಕೆಂಬುದುರ ಸುಳಿವುಗಳನ್ನು ಅವರಾಗಿಯೇ ನೀಡುತ್ತಾರೆ. ಆದರೆ ಅವುಗಳನ್ನು ನಾವು ಅರ್ಥೈಸಿಕೊಳ್ಳುವುದೇ ಕಷ್ಟಕರ ಕೆಲಸ!


ನವಜಾತ ಶಿಶುಗಳು ಆಗಿದ್ದಾಗಲೂ ಮಕ್ಕಳು ತಮಗೆ ಏನು ಬೇಕೆಂಬುದು ಸನ್ನೆಗಳ ಮೂಲಕ ನಮಗೆ ಸೂಚಿಸುತ್ತವೆ : ಒಂದು ರೀತಿಯ ಅಳು ತನ್ನ ಡೈಪರ್ ಅನ್ನು ಬದಲಿಸಬೇಕು ಎಂಬುದನ್ನು ಸೂಚಿಸಿದರೆ, ಇನ್ನೊಂದು ರೀತಿಯ ಅಳು ತನಗೆ ಹಸಿವಾಗುತ್ತದೆ ಎಂಬುದನ್ನು ಸೂಚಿಸುತ್ತದೆ.

ಆದರೆ ಅವರು ಬೆಳೆಯುತ್ತಾ, ಅವರ ಸನ್ನೆಗಳು ಮತ್ತು ಅಪ್ಪ-ಅಮ್ಮಂದಿರ ಸಹಾಯಕ್ಕೆ ಅವರು ಇಡುತ್ತಿರುವ ಬೇಡಿಕೆಯ ಸೂಚನೆಗಳು ನಾವು ಕಂಡು ಹಿಡಿಯುವುದು ಕಷ್ಟವಾಗುತ್ತಾ ಹೋಗುತ್ತದೆ. ನೀವು ನಿಮ್ಮ ಮಗುವಿಗೆ ನೇರವಾಗಿ “ಏನಾಯಿತು? ಎಲ್ಲವೂ ಸರಿಯಾಗಿ ಇದೇ ತಾನೇ?” ಎಂದು ಕೇಳಿದರೆ, ನಿಮಗೆ ಅವರಿಂದ ಅಷ್ಟೇನೂ ಮಾಹಿತಿ ಸಿಗುವುದಿಲ್ಲ. ಅವರು ಏನು ಹೇಳದೆ ಸುಮ್ಮನಿರಬಹುದು ಅಥವಾ “ಏನೂ ಇಲ್ಲ” ಎಂದು ಹೇಳಿ ಸುಮ್ಮನಾಗಿ ಬಿಡಬಹುದು.

ಆದರೆ ಚಿಂತಿಸಬೇಡಿ! ಹೀಗೆ ಮಕ್ಕಳ ಮನಸಿನ ಭಾವನೆಗಳನ್ನ, ಬೇಡಿಕೆಗಳನ್ನ ಅರ್ಥೈಸಿಕೊಳ್ಳಲು ಕಷ್ಟಪಡುವುದು ಸಹಜವೇ. ಏಕೆಂದರೆ ಬಹುತೇಕ ಬಾರಿ ಅವರು ನೀಡುವ ಸುಳಿವುಗಳು ಅಸ್ಪಷ್ಟವಾಗಿ ಇರುತ್ತವೆ. ಹೀಗಾಗಿ ನೀವು ನಿಮ್ಮ ಮಗುವಿನ ಎಲ್ಲಾ ಅಗತ್ಯಗಳನ್ನು, ಅವರಿಗೆ ಬೇಕಿರುವ ಎಲ್ಲಾ ಸಹಾಯಗಳನ್ನು ಕಲ್ಪಿಸಿ, ಉತ್ತಮ ಪೋಷಕರಾಗಬೇಕು ಎಂದುಕೊಂಡಿದ್ದರೆ, ಈ ಕೆಳಗಿನ 5 ಸಲಹೆಗಳು ನಿಮಗೆ ತುಂಬಾನೇ ಸಹಾಯ ಮಾಡುತ್ತವೆ.


೧. ನಿಮ್ಮ ಮಗುವಿನ ಆಸಕ್ತಿಗಳನ್ನು ಮನಸಾರೆ ಒಪ್ಪಿಕೊಳ್ಳಿ

ನಿಮ್ಮ ಮಗುವಿನ ಆಸಕ್ತಿಗಳನ್ನು ನೀವು ಒಪ್ಪಿಕೊಂಡರೆ, ಅದು ನಿಮ್ಮ ಮಗುವಿಗೆ ಉತ್ತಮವಾದದ್ದನ್ನೇ ನೀವು ಬಯಸುತ್ತೀರಿ ಎಂಬುದನ್ನು ನಿಮ್ಮ ಮಗುವಿಗೆ ತಿಳಿಸುತ್ತದೆ. ನಿಮ್ಮ ಪತಿ ಎಂದಿಗೂ ಒಂದು ಬಾರಿಯೂ ನಿಮ್ಮ ಜೀವನದಲ್ಲಿ ಏನಾಗುತ್ತಿದೆ ಎಂದೋ ಅಥವಾ ನಿನಗೆ ಏನು ಮಾಡಲು ಇಷ್ಟವೋ ಎಂದು ಕೇಳದೆ ಇದ್ದರೆ ನಿಮಗೆ ಹೇಗೆ ಅನಿಸುತ್ತದೆ ಎಂಬುದನ್ನು ಒಮ್ಮೆ ಊಹಿಸಿಕೊಳ್ಳಿ!

ನಿಮ್ಮ ಮಗುವಿನ ಆಸಕ್ತಿಗಳನ್ನು ಪೋಷಿಸುವ ಮೂಲಕ ನೀವು ಕೇವಲ ಅವರ ಜೀವನದಲ್ಲಿ ಇರುವುದಷ್ಟೇ ಅಲ್ಲ, ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದೀರಿ ಎನ್ನುವುದು ಮಗುವಿಗೆ ತೋರಿಸಬಹುದು. ಹೀಗೆ ಮಾಡುವುದರಿಂದ ನಿಮ್ಮ ಮಗುವಿನ ಮನದಾಳವನ್ನು ತಿಳಿದುಕೊಳ್ಳಬಹುದು ಮತ್ತು ನಿಮ್ಮ ಮಗುವಿಗೆ ಬೇಕಾಗಿರುವಂತಹ ಪೋಷಕರು ನೀವಾಗಬಹುದು.


೨. ನಿಮ್ಮ ಮಗು ಹೇಳುವುದನ್ನು ಕೇಳಿಸಿಕೊಳ್ಳಿ


ನಿಮ್ಮ ಮಗುವು ಏನಾದರೂ ಹೇಳುತ್ತಿರುವಾಗ ಅದನ್ನು ಅರ್ಧದಲ್ಲೇ ನಿಲ್ಲಿಸಿ ಅವರಿಗೆ ಬುದ್ಧಿವಾದ ಹೇಳುವಂತೆ ನಿಮ್ಮ ತಾಯ್ತನದ ಗುಣ ನಿಮ್ಮನ್ನು ಪ್ರೇರೇಪಿಸಬಹುದು, ಆದರೆ ನಿಮ್ಮ ಮಗು ಹೇಳುವುದನ್ನು ಅಳೆಯದೆ ಪೂರ್ತಿ ಕೇಳಿಸಿಕೊಳ್ಳಲು ಪ್ರಯತ್ನಿಸಿ. ನೀವು ಯಾರಿಗಾದರೂ ಏನಾದರೂ ಹೇಳಲು ಹೋದಾಗ, ಅವರು ನೀವು ಹಿಂದೆ ಮಾಡಿದ ತಪ್ಪುಗಳನ್ನೆಲ್ಲಾ ಕೆದಕಿ ನಿಮಗೆ ಬುದ್ದಿವಾದ ಹೇಳಲು ಶುರು ಮಾಡಿದರೆ ನಿಮಗೆ ಹೇಗೆ ಅನಿಸುತ್ತದೆ ಹೇಳಿ?

ನೀವು ಹೇಳಬೇಕೆಂದಿರುವ ಬುದ್ಧಿಮಾತುಗಳನ್ನು ಹಿಡಿದಿಟ್ಟುಕೊಂಡು, ಮಗುವು ಹೇಳುವುದನ್ನು ಮುಕ್ತ ಮನಸ್ಸಿನಿಂದ ಸಂಪೂರ್ಣವಾಗಿ ಕೇಳಿ. ಹೀಗೆ ಮಾಡಿದರೆ ನಿಮ್ಮ ಮತ್ತು ನಿಮ್ಮ ಮಗುವಿನ ನಡುವೆ ಉತ್ತಮ ಸಂವಹನ ಬೆಳೆಯುತ್ತದೆ. ಹೀಗೆ ಮಾಡುವುದರಿಂದ ನಿಮ್ಮ ಮಕ್ಕಳು ನಿಮಗೆ ಪ್ರಾಮಾಣಿಕವಾಗಿ ಉತ್ತರ ಕೊಡುವುದಲ್ಲದೆ, ಅವರಿಗೆ ಮತ್ತೇನಾದರೂ ತೊಂದರೆ ಉಂಟಾದರೆ, ಅವರೇ ಬಂದು ನಿಮಗೆ ಹೇಳಿಕೊಳ್ಳುತ್ತಾರೆ.


೩. ನಿಮ್ಮ ಮಗುವಿನ ತೊಂದರೆಯನ್ನು ಅವರ ದೃಷ್ಟಿಕೋನದಿಂದ ನೋಡಿ


ನಿಮ್ಮ ಮಗುವಿನ ದೃಷ್ಟಿಕೋನವನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿ ಮತ್ತು ನೀವು ಅವರ ಜಾಗದಲ್ಲಿ ನಿಂತುಕೊಂಡು ಯೋಚಿಸುವುದನ್ನು ಆಗಾಗ ಮಾಡುತ್ತಿರಿ. ನೀವು ಚಿಕ್ಕವರಾಗಿದ್ದಾಗ ನೀವು ಹೇಳುತ್ತಿರುವುದನ್ನು ನಿಮ್ಮ ದೃಷ್ಟಿಕೋನದಿಂದ ಯಾರೂ ಅರ್ಥ ಮಾಡಿಕೊಳ್ಳಲಿಲ್ಲ ಎಂದರೆ ಎಷ್ಟು ಹತಾಶೆ ಉಂಟಾಗುತ್ತಿತ್ತು ಎಂದು ಅಥವಾ ಕೇಳಲು ಕೂಡ ತಯಾರಿಲ್ಲ ಎಂದರೆ ನಿಮಗೆ ಹೇಗಾಗುತಿತ್ತು ಎಂಬುದನ್ನು ಯೋಚಿಸಿ.

ನೀವು ನಿಮ್ಮ ಮಕ್ಕಳ ದೃಷ್ಟಿಕೋನದಿಂದ ಯೋಚಿಸಿದಷ್ಟೂ, ನೀವು ಅವರಿಗೆ ಬೇಕಾಗಿರುವುದನ್ನು ಒದಗಿಸಲು ಸಫಲರಾಗುತ್ತೀರಿ. ನಿಮ್ಮ ಮಗುವಿನ ದೃಷ್ಟಿಕೋನದಿಂದ ಯೋಚಿಸುವುದು ನಿಮಗೆ ಅವರು ಕೇಳುತ್ತಿರುವುದನ್ನು ಅರ್ಥ ಮಾಡಿಕೊಳ್ಳಲು ಸಹಾಯ ಮಾಡಿ, ಉತ್ತಮ ಪೋಷಕರನ್ನಾಗಿ ಮಾಡುತ್ತದೆ.


೪. ನಿಮ್ಮ ಮಕ್ಕಳಿಗೆ ಅನುಭೂತಿ ನೀಡಿ


ನಿಮ್ಮ ಮಕ್ಕಳ ತೊಂದರೆಗಳು ಅಥವಾ ಬೇಡಿಕೆಗಳು ನಿಮಗೇ ಎಷ್ಟೇ ಚಿಕ್ಕದೆನಿಸಬಹುದು, ಆದರೆ ನೀವು ಅದನ್ನು ಅನುಭೂತಿಯಿಂದಲೇ ನೋಡಬೇಕು. ಅದು ಚಿಕ್ಕದು ಎಂದು ತಳ್ಳಿ ಹಾಕಿಬಿಡಬಾರದು.

ನಿಮ್ಮ ಮಗುವಿಗೆ ಅನುಭೂತಿಯಿಂದ ಸ್ಪಂದಿಸಿದರೆ, ಅವರು ಕೇಳುತ್ತಿರುವುದು ಅವರಿಗೆ ಏಕೆ ಮುಖ್ಯ, ಎಷ್ಟು ಮುಖ್ಯ ಎಂಬುದು, ಯಾವುದು ಅವರಿಗೆ ಕಷ್ಟ ಆಗುತ್ತದೆ ಎಂಬುದು, ಏಕೆ ಕಷ್ಟ ಆಗುತ್ತಿದೆ ಎಂಬುದು, ಕೆಲವೊಂದು ಸಂದರ್ಭಗಳು ಅವರಲ್ಲಿ ಕೆಟ್ಟ  ರೀತಿಯ ಭಾವನೆ ಉಂಟು ಮಾಡುವುದು ಏಕೆ ಎಂಬುದು ಗೊತ್ತಾಗುತ್ತದೆ. ಒಂದು ಬಾರಿ ನೀವು ಇವುಗಳನ್ನು ಅರ್ಥ ಮಾಡಿಕೊಂಡ ಮೇಲೆ, ನಿಮ್ಮ ಮಗುವಿಗೆ ನೀವು ಸಮರ್ಥವಾಗಿ ಸಹಾಯ ಮಾಡಲು ಮತ್ತು ಉತ್ತಮ ಪೋಷಕರಾಗಲು ಸಹಾಯ ಮಾಡುತ್ತದೆ.


೫. ನಿಮ್ಮ ಮಗುವಿಗೆ ನಿಮ್ಮಷ್ಟು ತಿಳಿದಿಲ್ಲ ಎಂಬುದನ್ನು ಯಾವಾಗಲೂ ನೆನಪಿಡಿ


ನಿಮ್ಮ ಮಗುವಿಗೆ ಅನುಭವ ಕಡಿಮೆ. ಹೀಗಾಗಿ ಅವರ ದೃಷ್ಟಿ ಚಿಕ್ಕದಿರುತ್ತದೆ. ಹೀಗಾಗಿ ಜೀವನದ ಬಗ್ಗೆ ನಿಮ್ಮ ಮಗುವಿಗೆ ಇರುವ ಅರಿವನ್ನು ನೀವು ವೃದ್ಧಿಸಬೇಕು ಮತ್ತು ಸಂದರ್ಭಕ್ಕೆ ತಕ್ಕಂತೆ ಅವರ ವಿಧಾನಗಳನ್ನು ರೂಪಿಸಿಕೊಳ್ಳಲು, ಮಾರ್ಪಡಿಸಿಕೊಳ್ಳಲು ಹೇಳಿಕೊಡಬೇಕು.

ನಿಮ್ಮ ಮಗುವಿನ ಸಾಮರ್ಥ್ಯವನ್ನು ನೀವು ಅರಿಯಬೇಕು. ಸಾಮರ್ಥ್ಯ ಎಂದರೆ ಕೇವಲ ನಿಮ್ಮ ಮಗುವಿಗೆ ಏನೆಲ್ಲಾ ಮಾಡಲು ಆಗುತ್ತದೆ ಎಂಬುದಷ್ಟೇ ಅಲ್ಲ, ಅವರಿಗೆ ಯಾವುದು ಆಗುವುದಿಲ್ಲ ಎಂಬುದನ್ನೂ ತಿಳಿದಿರಬೇಕು. ಏಕೆಂದರೆ ಹೀಗೆ ಮಾಡಿದ ಮೇಲಷ್ಟೇ ನಿಮ್ಮ ಮಗುವಿಗೆ ಕಲಿಕೆ, ಬೆಳವಣಿಗೆ ಮತ್ತು ಆರೋಗ್ಯಕರ, ಬುದ್ದಿವಂತ ವ್ಯಕ್ತಿ ಆಗಿ ರೂಪುಗೊಳ್ಳುವುದರಲ್ಲಿ ಸಹಾಯ ಮಾಡಲು ಸಾಧ್ಯ.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon