Link copied!
Sign in / Sign up
8
Shares

ಹೆರಿಗೆ ನೋವು ಮತ್ತು ಹೆರಿಗೆ ಸಮಯದಲ್ಲಿ ಮಗುವಿಗೆ ಏನು ಅನುಭವ ಆಗುತ್ತಿರುತ್ತದೆ? ಕುತೂಹಲಕಾರಿ !

ಹೆರಿಗೆ ನೋವು ಮತ್ತು ಹೆರಿಗೆ ಪ್ರಕ್ರಿಯೆಯು ಹೇಗಿರುತ್ತದೆ ಎಂಬುದನ್ನ ನಾವು ನೋಡಿರುತ್ತೇವೆ, ಅನುಭವಿಸಿರುತ್ತೇವೆ ಅಥವಾ ಅನುಭವಿಸಿದವರ ಅನುಭವವನ್ನ ಕೇಳಿರುತ್ತೇವೆ. ಬಹುತೇಕ ಎಲ್ಲಾ ಗರ್ಭಧಾರಣೆಗೆ, ಹೆರಿಗೆಗೆ ಸಂಬಂಧಿಸಿದ ಲೇಖನಗಳಲ್ಲೂ ನೀವು ಕೇವಲ ಅಮ್ಮಂದಿರ ದೃಷ್ಟಿಕೋನದಿಂದ ಹೇಗಿರುತ್ತದೆ ಎಂಬುದನ್ನ ಓದುತ್ತೇವೆ. ಆದರೆ, ಈ ಸಮಯದಲ್ಲಿ ಮಗುವಿಗೆ ಏನು ಅನಿಸುತ್ತಿರುತ್ತದೆ? ಅದು ಏನು ಅನುಭವಿಸುತ್ತಿರುತ್ತದೆ? ಇದನ್ನ ಬಹುಷಃ ನೀವು ಎಲ್ಲಿಯೂ ಓದಿರಲಿಕ್ಕಿಲ್ಲ. ವಿಜ್ಞಾನಿಗಳು ಬಹಳಷ್ಟು ಅಧ್ಯಯನಗಳು, ಸಂಶೋಧನೆಗಳನ್ನ ಕೈಗೊಂಡ ಮೇಲೆ ನಮಗೆ ಕೆಲವೊಂದು ಪ್ರಶ್ನೆಗಳಿಗೆ ಉತ್ತರ ಸಿಕ್ಕಿದೆ. ಹಾಗಿದ್ದರೆ, ಮಗುವು ಈ ಹೆರಿಗೆ ನೋವು ಮತ್ತು ಹೆರಿಗೆಯ ಸಮಯದಲ್ಲಿ ಏನು ಅನುಭವಿಸುತ್ತಿರುತ್ತದೆ ಎಂಬುದನ್ನ ನೋಡೋಣ ಬನ್ನಿ.


ಹೊಟ್ಟೆಯೊಳಗಿರುವ ಭ್ರೂಣವು ಗರ್ಭಧಾರಣೆಯ ಕೊನೆಯ 4-6 ವಾರಗಳು ಹೊರಜಗತ್ತಿಗೆ ಕಾಲಿಡಲು ಬೇಕಿರುವ ಎಲ್ಲಾ ಸಿದ್ಧತೆಗಳನ್ನ ಮಾಡಿಕೊಳ್ಳಲು ಶುರು ಮಾಡುತ್ತದೆ. ಅದು ತನ್ನ ತೂಕವನ್ನ ಹೆಚ್ಚಿಸಿಕೊಳ್ಳುತ್ತದೆ. ಈ ತೂಕ ಗಳಿಕೆಯ ಹೆರಿಗೆ ಸಮಯದಲ್ಲಿ ಬೇಕಾದ ವಿಯೋಜಕತೆ ನೀಡುತ್ತದೆ - ಅಂದರೆ, ಮಗುವಿನ ದೇಹದಲ್ಲಿನ ಕೊಬ್ಬು, ಹೆರಿಗೆ ಸಮಯದಲ್ಲಿ ಚಳಿ ಆಗುವುದರಿಂದ ಮತ್ತು ತಾನು ಹಾಲು ಕುಡಿಯಲು ಕಲಿಯುವವರೆಗೂ ಬದುಕಲು ಬೇಕಿರುವ ಶಕ್ತಿಯನ್ನ ಕೊಡುತ್ತದೆ.


ಹೆರಿಗೆಯ ಕೆಲವು ವಾರಗಳ ಮುನ್ನ ಮಗುವು ತುಂಬಾ ಸೈಲೆಂಟ್ ಆಗಿಬಿಡುತ್ತದೆ. ಅದಕ್ಕೆ ಕಾರಣ, ಈ ಸಮಯದಲ್ಲಿ ಮಗುವಿನ ಸುತ್ತ ಆಮ್ನಿಯೋಟಿಕ್ ದ್ರವ್ಯವು ಹೆಚ್ಚಾಗುತ್ತದೆ. ಇದರಿಂದ ಮಗುವಿಗೆ ಹೆಚ್ಚು ಚಲನೆಯನ್ನ ಮಾಡಲಿಕ್ಕೆ ಜಾಗ ಇರುವುದಿಲ್ಲ. ಒಂದು ವೇಳೆ ಚಲನವಲನ ಏನಾದರು ಇದ್ದರೆ, ಅದು ಚಿಕ್ಕ ಪುಟ್ಟದ್ದು ಆಗಿರುತ್ತವೆ ಅಷ್ಟೇ. ಈ ದೀರ್ಘಕಾಲದ ಹೆರಿಗೆ ಪ್ರಕ್ರಿಯೆಯನ್ನ ಶುರು ಮಾಡುವುದು ಮಗುವೇ. ಹೌದು, ಮಗುವು ತನ್ನ ಸಂಪೂರ್ಣ ಗಾತ್ರದ ಬೆಳವಣಿಗೆ ಹೊಂದಿದ ನಂತರ ಅಮ್ಮನ ದೇಹದಲ್ಲಿ ಕೆಲವೊಂದು ಹಾರ್ಮೋನುಗಳನ್ನ ಬಿಡುಗಡೆ ಮಾಡುತ್ತದೆ. ಈ ಹಾರ್ಮೋನುಗಳು ಅಮ್ಮನು ಇವುಗಳಿಗೆ ಪ್ರತಿಯಾಗಿ ತಾನೂ ಕೆಲವೊಂದು ಹಾರ್ಮೋನುಗಳನ್ನ ಬಿಡುಗಡೆ ಮಾಡುವಂತೆ ಮಾಡುತ್ತವೆ. ಇದರಿಂದಲೇ ಕಾಂಟ್ರಕ್ಷನ್ (ಸಂಕೋಚನಗಳು) ಉಂಟಾಗುವುದು.


ಅಮ್ಮನ ಹೊಟ್ಟೆಯೊಳಗೆ ಸಂಕೋಚನಗಳು (ಕಾಂಟ್ರಕ್ಷನ್) ಶುರು ಆದಾಗ, ಮಗುವು ಏನು ಅನುಭವಿಸುತ್ತದೆ? ತಜ್ಞರು ಹೇಳುವ ಪ್ರಕಾರ ತಾಯಿಯ ಗರ್ಭಕೋಶದೊಳಗೆ ಸುಮಾರು ಮರ್ಕ್ಯುರಿಯ 40-50 ಮಿಲಿಮೀಟರ್ ಅಷ್ಟು ಒತ್ತಡ ಇರುತ್ತದೆ. ಇದು ಸಿಕ್ಕಾಪಟ್ಟೆ ಹೆಚ್ಚು ಒತ್ತಡ. ಆದರೆ ಈ ಒತ್ತಡವು ಮಗುವಿನ ಸುತ್ತಾ ಇರುತ್ತದೆ ಹೊರತು, ಮಗುವಿನ ಮೇಲೆ ಇರುವುದಿಲ್ಲ. ಮಗುವು ಆಮ್ನಿಯೋಟಿಕ್ ದ್ರವ್ಯವಿರುವ ಚೀಲದಲ್ಲಿರುವ ಕಾರಣ, ಅದಕ್ಕೆ ಯಾವುದೇ ತೊಂದರೆಯಾಗುವುದಿಲ್ಲ. ಇದು ಒಂದು ರೀತಿ ನೀರೊಳಗೆ ಮುಳುಗಿ, ಇನ್ನೂ ಆಳಕ್ಕೆ ಡೈವ್ ಮಾಡುವಂತೆ.


ಹೆರಿಗೆ ಪ್ರಕ್ರಿಯೆಯು ಮುಂದುವರೆದಂತೆ ಮಗುವು ಜನನ ನಾಳದ ಮೂಲಕ ಕೆಳಗಿಳಿಯುತ್ತಾ ಬರುತ್ತದೆ. ಮಗುವು ಮೊದಲಿಗೆ ಬದಿಗೆ (ಸೈಡಿಗೆ) ಮುಖ ಮಾಡಿರುತ್ತದೆ, ಅನಂತರ ಅದು ಅಮ್ಮನ ಒಂದು ಪೃಷ್ಠದ ಕಡೆ ಮುಖ ತಿರುಗಿಸುತ್ತದೆ, ಅನಂತರ ಇನ್ನೂ ಸ್ವಲ್ಪ ತಿರುಗಿಕೊಂಡು ಮುಖವನ್ನ ಅಮ್ಮನ ಬೆನ್ನಿಗೆ ತಿರುಗಿಸಿಕೊಳ್ಳುತ್ತದೆ.


ಇದರ ನಂತರ ಅಮ್ಮನು ತನ್ನ ಮಗುವನ್ನು ಹೊರದೂಡಲು ಆರಂಭಿಸುತ್ತಾಳೆ. ಆಗ ಗರ್ಭಕೋಶದ ಒಳಗಿನ ಒತ್ತಡವು ಜಾಸ್ತಿ ಆಗುತ್ತದೆ. ಈ ಸಮಯದಲ್ಲಿ ಮಗುವಿಗೆ ಏನೆನಿಸುತ್ತದೆ ಎಂಬುದು ಗೊತ್ತಿಲ್ಲ, ಆದರೆ ಪ್ರಕೃತಿಯು ನಮಗೆ ನೋವು ಮಾಡಲು ಇಷ್ಟಪಡುವುದಿಲ್ಲ ಎಂದು ತಜ್ಞರು ಹೇಳುತ್ತಾರೆ. ಏಕೆಂದರೆ ಮಕ್ಕಳು ಹೊರಬಂದ ತಕ್ಷಣ ಅಳುವುದು ನೋವಿನಿಂದ ಅಲ್ಲ. ಬದಲಿಗೆ ಅದು ಕೇವಲ ಜೋರಾಗಿ ಉಸಿರಾಡುವುದರಿಂದ ಮತ್ತು ಅದರ ಶ್ವಾಸಕೋಶದಲ್ಲಿ ತುಂಬಿಕೊಂಡ ದ್ರವ್ಯವನ್ನ ಹೊರಹಾಕಲಿಕ್ಕೆ ಮಾಡುವ ರಿಫ್ಲೆಕ್ಸ್ ಆಕ್ಷನ್ನ ಒಂದು ಸದ್ದು ಅಷ್ಟೇ ಎನ್ನುತ್ತಾರೆ ತಜ್ಞರು. ಅವರು ಮುಖವನ್ನ ಕೂಡ ಗಂಟಿಕ್ಕಿಕೊಂಡು ಇರುತ್ತಾರೆ, ಏಕೆಂದರೆ ಅವರು ಒಂದೇ ಸಮನೆ ಒಂದು ಕತ್ತಲೆಯ, ಮೃದು ಸದ್ದುಗಳಿದ್ದ ವಾತಾವರಣದಿಂದ, ಅದರ ತದ್ವಿರುದ್ದ ವಾತಾವರಣಕ್ಕೆ ಕಾಲಿಟ್ಟಿರುತ್ತಾರೆ. ನಾವು ಮಲಗಿದ್ದಾಗ ದಿಢೀರನೆ ಯಾರಾದರೂ ಲೈಟ್ ಹಾಕಿದರೆ ನಾವು ಕಣ್ಣುಗಳನ್ನ ಹೇಗೆ ಮುಚ್ಚಿಕೊಳ್ಳುತ್ತೀವೋ, ಹಾಗೆಯೇ ಇದು ಕೂಡ.

Tinystep Baby-Safe Natural Toxin-Free Floor Cleaner

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon