Link copied!
Sign in / Sign up
2
Shares

ಈ 6 ಅಂಶಗಳು ನಿಮಗೆ ಗರ್ಭಿಣಿ ಆಗಿದ್ದಾಗ ಹೃದಯಾಘಾತ ಉಂಟಾಗುವ ಸಾಧ್ಯತೆಗಳನ್ನ ಹೆಚ್ಚಿಸುತ್ತವೆ!

ಗರ್ಭಧಾರಣೆಯು ನಿಮ್ಮ ದೇಹದ ಮೇಲೆ ಅಪಾರವಾದ ಒತ್ತಡವನ್ನು ಹೇರುತ್ತದೆ. ನೀವು ಕೇವಲ ನಿಮ್ಮ ಹೊಟ್ಟೆಯಲ್ಲಿ ಬೆಳೆಯುತ್ತಿರುವ ಪುಟ್ಟ ಮಾನವನಿಂದ ಆಗುತ್ತಿರುವ ನೋವು ಮತ್ತು ಬೇನೆ ಅನುಭವಿಸುತ್ತಿರಲ್ಲದೆ, ಗರ್ಭಧಾರಣೆ ಸಮಯದಲ್ಲಿ ಕೆಲವೊಂದು ಅಂಶಗಳು ನಿಮಗೆ ಇತರೆ ಆರೋಗ್ಯಕ್ಕೆ ಸಂಬಂಧಿಸಿದ ತೊಂದರೆಗಳನ್ನ ತಂದು ಒಡ್ಡಬಹುದು. ಉದಾಹರಣೆಗೆ ನಿಮಗೆ ಹೃದಯಾಘಾತದ ಯಾವುದೇ ಇತಿಹಾಸವಿಲ್ಲ ಎಂದರೂ, ಗರ್ಭಧಾರಣೆ ಸಮಯದಲ್ಲಿ ನಿಮಗೆ ಹೃದಯಾಘಾತ ಉಂಟಾಗುವ ಸಾಧ್ಯತೆಗಳನ್ನು ಹೆಚ್ಚಿಸುವಂತಹ ಅಂಶಗಳು ಇದ್ದು, ಇವುಗಳ ಬಗ್ಗೆ ಪ್ರತಿ ತಾಯಿಯೂ ಎಚ್ಚರವಹಿಸಬೇಕು.

ಹೃದಯತಜ್ಞರಾದ ಡಾ ।। ಸುರೇಶ್ ಶರ್ಮ ಅವರ ಪ್ರಕಾರ ಹೃದಯಾಘಾತದ ಸಾಧ್ಯತೆಗಳನ್ನು ಪರೀಕ್ಷಿಸುವ ಪ್ರಕ್ರಿಯೆಯಲ್ಲಿ ಲಿಂಗ ತಾರತಮ್ಯ ಇದೆ. ಹೃದಯಾಘಾತ ಸಂಭವಿಸುವ ಲಕ್ಷಣಗಳನ್ನು ಗುರುತಿಸುವಲ್ಲಿ ಗಂಡಸರು ಮತ್ತು ಹೆಂಗಸರ ನಡುವೆ ತಾರತಮ್ಯ ಇದೆ. ಹೆಂಗಸರಲ್ಲಿ ಹೃದಯಾಘಾತ ಸಂಭವಿಸುವ ಸಾಧ್ಯತೆಗಳು ಮತ್ತು ಸಂಭವಿಸಲು ಉಂಟಾಗುವ ಕಾರಣಗಳ, ಲಕ್ಷಣಗಳ ಗುರುತಿಸುವಿಕೆಯು ಗಂಡಸರಿಗಿಂತ ಕಡಿಮೆ. ಇಷ್ಟಲ್ಲದೆ ಇತ್ತೀಚಿಗೆ ಗರ್ಭಧಾರಣೆ ವೇಳೆ ಹೃದಯಾಘಾತ ಅನುಭವಿಸಿದ 150 ಹೆಂಗಸರ ಪ್ರಕರಣಗಳನ್ನ ಇವರು ಪರಿಶೀಲಿಸಿದಾಗಲೂ, ಈ ಹೆಂಗಸರ ಬಗ್ಗೆ ಹಿಂದೆಂದೂ ಹೃದಯ ಸಂಬಂಧಿ ತೊಂದರೆಗಳು ಇರುವುದನ್ನು ಎಂದೂ ತಪಾಸಣೆ ಮಾಡೇ ಇಲ್ಲ ಎಂಬುದು ತಿಳಿದು ಬಂದಿದೆ.

ದಿ ಅಮೆರಿಕನ್ ಕಾಲೇಜ್ ಆಫ್ ಕಾರ್ಡಿಯಾಲಜಿ ಪ್ರಕಾರ ಪ್ರೆಗ್ನನ್ಸಿ ಅಲ್ಲಿ ಉಂಟಾಗುವ ವಿಪರೀತ ಹಾರ್ಮೋನ್ ಏರುಪೇರು ಮತ್ತು ದೇಹದಲ್ಲಿ ಸಂಚರಿಸುವ ರಕ್ತದ ಪ್ರಮಾಣದಲ್ಲಿನ ಏರಿಕೆಯು ಹೆಂಗಸರಲ್ಲಿ ಹೃದಯಾಘಾತ ಉಂಟಾಗುವ ಸಾಧ್ಯತೆಗಳನ್ನು ಇತರೆ ಸಮಯಕ್ಕಿಂತ 2-3 ಪಟ್ಟು ಹೆಚ್ಚಾಗುವಂತೆ ಮಾಡುತ್ತವೆ. ಗರ್ಭಧಾರಣೆ ವೇಳೆ ರಕ್ತದ ಪ್ರಮಾಣವು 30-50% ಅಷ್ಟು ಹೆಚ್ಚಾಗುವ ಕಾರಣ, ಹೃದಯವು ಹೆಚ್ಚಿನ ವೇಗದಲ್ಲಿ ಬಡಿದುಕೊಳ್ಳುತ್ತಿರುತ್ತದೆ ಮತ್ತು ನಾಡಿಮಿಡಿತವು ಹೆಚ್ಚಾಗುತ್ತದೆ.

ಆದರೆ ಈ ಸಂಖ್ಯೆಗಳು ನಿಮ್ಮ ನಿದ್ದೆಗೆಡಿಸದಿರಲಿ. ಗರ್ಭಧಾರಣೆ ಸಮಯದಲ್ಲಿ ಹೆಣ್ಣಿಗೆ ಹೃದಯಾಘಾತ ಉಂಟಾಗುವ ಸಾಧ್ಯತೆಗಳು ಜಾಸ್ತಿ ಇದ್ದರೂ, 16000 ಹೆರಿಗೆಗಳಲ್ಲಿ ಒಬ್ಬರಿಗೆ ಮಾತ್ರ ಹೃದಯಾಘಾತ ಉಂಟಾಗುತ್ತದೆ. ಆದರೆ ಇದನ್ನು ಉಂಟುಮಾಡುವ ಅಂಶಗಳಿಗೆ ತಪಾಸಣೆ ಮಾಡಿಸುವುದು ತುಂಬಾನೇ ಮುಖ್ಯ ಮತ್ತು ಹೆರಿಗೆ ವೇಳೆ ಹೃದಯಾಘಾತ ಉಂಟು ಮಾಡುವ ಅಂಶಗಳ ಬಗ್ಗೆ ತಿಳಿದಿಕೊಂಡಿರುವುದು ಕೂಡ ಒಳ್ಳೆಯದು. ಆ ಅಂಶಗಳ ಪಟ್ಟಿ ಇಲ್ಲಿದೆ ಓದಿ :

 

೧. ಪ್ರಿ-ಎಕ್ಲ್ಯಾಮ್ಪ್ಸಿಯ (Preeclampsia)

ಹಾಪ್ಕಿನ್ಸ್ ಮೆಡಿಸಿನ್ ಸಂಸ್ಥೆ ಅವರ ಪ್ರಕಾರ ಪ್ರಿ-ಎಕ್ಲ್ಯಾಮ್ಪ್ಸಿಯ ಅಂದರೆ ಗರ್ಭಧಾರಣೆಯಿಂದ ಉಂಟಾಗುವ ಅಧಿಕ ರಕ್ತದೊತ್ತಡ (ಮೂತ್ರದಲ್ಲಿ ಪ್ರೋಟೀನ್ ಇರುವುದರ ಜೊತೆಗೆ). ಇದು ಎಕ್ಲ್ಯಾಮ್ಪ್ಸಿಯ ಎಂಬ ತೊಂದರೆಯ ಮುನ್ಸೂಚನೆ. ಎಕ್ಲ್ಯಾಮ್ಪ್ಸಿಯ ಕೋಮಾ, ಸೀಜರ್ಸ್ ಮತ್ತು ಸಾವನ್ನು ಉಂಟು ಮಾಡಬಹುದಾದಂತಹ ತೊಂದರೆ. ಒಂದು ವೇಳೆ ಗರ್ಭಿಣಿ ಹೆಂಗಸಿಗೆ ಈ ಮುಂಚೆ  ಪ್ರಿ-ಎಕ್ಲ್ಯಾಮ್ಪ್ಸಿಯ ಆಗಿದ್ದರೆ, ಹೆರಿಗೆ ವೇಳೆ ಅಥವಾ ಹೆರಿಗೆ ಆದೊಡನೆ ಹೃದಯಾಘಾತ ಉಂಟಾಗುವ ಸಾಧ್ಯತೆಗಳು ಹೆಚ್ಚಿರುತ್ತವೆ. ಏಕೆಂದರೆ ಪ್ರಿ-ಎಕ್ಲ್ಯಾಮ್ಪ್ಸಿಯ ರಕ್ತದೊತ್ತಡವನ್ನು ಏರಿಸಿ ನಿಮ್ಮ ಹೃದಯದ ಮೇಲಿನ ಒತ್ತಡವನ್ನು ಏರಿಸುತ್ತದೆ.

 

೨. ಗರ್ಭಧಾರಣೆಯ ಮಧುಮೇಹ (gestational diabetes)

ಸಾಮಾನ್ಯವಾಗಿ ಮಗುವಿನ ಹೆರಿಗೆ ಆದೊಡನೆ ಗರ್ಭಧಾರಣೆಯ ಮಧುಮೇಹವು ನಾಪತ್ತೆ ಆಗುತ್ತೆ ಆದರೂ, ತಾಯಿಯು ಭವಿಷ್ಯದಲ್ಲಿ ಡಯಾಬಿಟಿಸ್ ಅಥವಾ ಮಧುಮೇಹ ಹೊಂದುವ ಅಪಾಯಗಳು ಹೆಚ್ಚುತ್ತವೆ. 20 ವರ್ಷಗಳ ಕಾಲದ ಪ್ರಕರಣಗಳನ್ನ ಪರಿಗಣಿಸಿದ ಅಧ್ಯಯನವು 18-30 ವರ್ಷದ 898 ಹೆಂಗಸರ ಪ್ರಕರಣಗಳನ್ನ ಪರಿಗಣಿಸಿ ಒಂದು ವಿಷಯ ಕಂಡು ಹಿಡಿದಿದೆ. ಅದೇನೆಂದರೆ ಈ ಗರ್ಭಧಾರಣೆ ಮಧುಮೇಹ ಹೊಂದಿದ್ದ ಹೆಂಗಸರಿಗೆ ಅಥೆರೋಸ್ಲೆರೊಸಿಸ್, ಟೈಪ್-2 ಡಯಾಬಿಟಿಸ್ ಮತ್ತು ಮೆಟಾಬಾಲಿಕ್ ಸಿಂಡ್ರೋಮ್ ಉಂಟಾಗುವ ಸಾಧ್ಯತೆಗಳು ಹೆಚ್ಚಿರುತ್ತವೆ ಎಂಬುದು.

ಹೀಗಾಗಿ ಒಂದು ವೇಳೆ ನಿಮಗೆ ಗರ್ಭಧಾರಣೆ ಮಧುಮೇಹ ಇದ್ದು, ಅದು ನಿಮಗೆ ಹೆರಿಗೆ ಆದತಕ್ಷಣ ಮಾಯವಾದರೂ, ಭವಿಷ್ಯದಲ್ಲಿ ನಿಮಗೆ ಅದರಿಂದ ಹೃದಯಾಘಾತ ಉಂಟಾಗುವ ಸಾಧ್ಯತೆಗಳು ಇರುತ್ತವೆ.

 

೩. ಅಪಧಮನಿಗಳ (arteries) ಕಿರಿದಾಗುವಿಕೆ

ಕತ್ತಿನ ಎರಡೂ ಬದಿಯು ಕಾಣಿಸಿಕೊಳ್ಳುವ ಮುಖ್ಯ ಅಪಧಮನಿಗಳನ್ನು ಕ್ಯಾರೋಟಿಡ್ ಅಪಧಮನಿಗಳು ಎನ್ನುತ್ತಾರೆ. ಈ ಅಪಧಮನಿಗಳು ಹೃದಯದಿಂದ ಮೆದುಳಿಗೆ ರಕ್ತ ಸಾಗಿಸುತ್ತವೆ. ಹೃದಯಾಘಾತ ಉಂಟಾಗಲು ಎಷ್ಟೋ ಕಾರಣಗಳು ಇರಬಹುದು - ಆದರೆ ನಿಮಗೆ ಹೃದಯಾಘಾತ ಉಂಟಾಗುವ ಸಾಧ್ಯತೆಗಳು ಹೆಚ್ಚಾಗುವುದು ನಿಮ್ಮ ದೇಹವು ಕಿರಿದಾದ ಅಪಧಮನಿಗಳ ಮೂಲಕ ರಕ್ತ ಸಾಗಿಸಲು ಕಷ್ಟಪಟ್ಟಾಗ. ರಕ್ತಸಂಚಾರಕ್ಕೆ ಅಡ್ಡಿ ಉಂಟಾದರೆ, ಅದು ಎದೆನೋವು ಅಥವಾ ಹೃದಯಾಘಾತದಲ್ಲಿ ಕೊನೆಯಾಗಬಹುದು.

 

೪. ಪರಿಧಮನಿಯ (ಕೊರೋನರಿ) ಛೇಧನ

ಗರ್ಭಿಣಿ ಹೆಂಗಸರು ಅನುಭವಿಸುವ ಒಂದು ಸಾಮಾನ್ಯ ಹೃದಯ-ಸಂಬಂಧಿ ಕಾಯಿಲೆ ಎಂದರೆ, ಅದು ಪರಿಧಮನಿಯ ಛೇಧನ (coronary dissection). ಕೊರೋನರಿ ಡಿಸೇಕ್ಷನ್ ಎಂದರೆ ಸಹಜ ರಕ್ತಸಂಚಾರವನ್ನು ತಡೆಗಟ್ಟುವ ಅಪಧಮನಿಗಳ ಗೋಡೆಯ ಮೇಲ್ಪದರಗಳು ಬೇರೆಯಾಗುವುದು. ಇದು ಗರ್ಭಿಣಿ ಆಗಿಲ್ಲದವರಲ್ಲಿ ಕಾಣಿಸಿಕೊಳ್ಳುವುದು ತುಂಬಾನೇ ವಿರಳ, ಆದರೆ ಗರ್ಭಿಣಿ ಆದರೆ ಇದರ ಮೇಲೆ ಗಮನವಿರಬೇಕು.

 

೫. ನಾಡಿಮಿಡಿತ ತೊಂದರೆ

ಗರ್ಭಧಾರಣೆ ವೇಳೆ ನಿಮ್ಮ ನಾಡಿಮಿಡಿತದಲ್ಲಿ ಉಂಟಾಗುವ ಅಸಹಜತೆಗಳು ಸಾಮಾನ್ಯ. ಏಕೆಂದರೆ ಈ ಸಮಯದಲ್ಲಿ ನಿಮ್ಮ ಹೃದಯದ ಮೇಲೆ ಹೆಚ್ಚಿದ ಒತ್ತಡ ಇರುತ್ತದೆ. ಆದರೆ ನಿಮ್ಮ ವೈದ್ಯರು ನಿಮ್ಮ ತಪಾಸಣೆ ನಡೆಸಿ, ನಿಮಗೆ ಅರಿತಾಮಿಯಾ ಇದೆ ಎಂದು ಕಂಡು ಹಿಡಿದರೆ, ಅವರು ನಿಮಗೆ ಔಷಧಿಗಳನ್ನು ನೀಡುತ್ತಾರೆ. ಒಂದು ವೇಳೆ ಇದು ಇನ್ನಷ್ಟು ತೀವ್ರ ಸ್ವರೂಪ ತಾಳಿದರೆ ಅಥವಾ ನಿಯಂತ್ರಣಕ್ಕೆ ಸಿಗದೇ ಇರುವಂತದ್ದು ಆದರೆ, ನಿಮಗೆ ಹೃದಯಾಘಾತ ಉಂಟಾಗುವ ಸಾಧ್ಯತೆಗಳು ಯಾವುದೂ ಇಲ್ಲವೆಂದು ಖಚಿತಪಡಿಸಿಕೊಳ್ಳಲು ನಿಮ್ಮನ್ನು ಇನ್ನಷ್ಟು ಪರೀಕ್ಷೆಗಳಿಗೆ ಒಳಪಡಿಸಬಹುದು.

 

೬. ಕಂಜೆಸ್ಟಿವ್ ಹೃದಯ ವಿಫಲತೆ ಅಥವಾ ಅಸ್ವಸ್ಥತೆ

ರಕ್ತದ ಪ್ರಮಾಣ ತುಂಬಾನೇ ಹೆಚ್ಚಿದಾಗ ಹೃದಯ ವೈಫಲ್ಯತೆ ಉಂಟಾಗುತ್ತದೆ. ಒಂದು ವೇಳೆ ನಿಮ್ಮ ಹೃದಯದ ಸ್ನಾಯುಗಳನ್ನು ಮೆತ್ತಗಾಗಿಸುವ ಅಥವಾ ಹೃದಯವನ್ನು ಹಿಗ್ಗಿಸುವಂತಹ ಯಾವುದಾದರೂ ಅಸ್ವಸ್ಥತೆಗಳನ್ನು ನೀವು ಬೆಳೆಸಿಕೊಂಡರೆ, ನಿಮ್ಮ ದೇಹದ ಎಲ್ಲಾ ಭಾಗಗಳಿಗೂ ರಕ್ತ ಸಂಚಾರ ಆಗುವುದಿಲ್ಲ. ಇದರ ಪರಿಣಾಮ ಮಾರಣಾಂತಿಕ ಆಗಬಹುದು. ಈ ಕಾರಣಕ್ಕಾಗಿ ನಿಮ್ಮ ದೇಹದಲ್ಲಿ ಅಸಹಜ ಎನಿಸುವಂತಹ ಯಾವುದೇ ವಿದ್ಯಮಾನಗಳು ಉಂಟಾಗುತ್ತಿಲ್ಲ ಎಂಬುದನ್ನು ನಿಮ್ಮ ವೈದ್ಯರೊಡನೆ ಮಾತನಾಡಿ ಖಚಿತಪಡಿಸಿಕೊಳ್ಳಿ.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon