Link copied!
Sign in / Sign up
254
Shares

ಈ 7 ಕಾರಣಗಳಿಗೆ ಹೆರಿಗೆ ಸಮಯದಲ್ಲಿ ಗಂಡ ಜೊತೆಗಿರಲೇಬೇಕು!

ಈಗಿನ ಕಾಲದಲ್ಲಿ ಬದುಕು ಕುಕ್ಕರ್ ಒಳಗೆ ಇರುವ ಮೆಕ್ಕೆಜೋಳದಂತೆ ಆಗಿದೆ. ದೈಹಿಕ,ಮಾನಸಿಕ ಒತ್ತಡ ಎಲ್ಲಡೆಯಿಂದ ಆವರಿಸಿದೆ. ಇಂತಹದರಲ್ಲಿ ಗರ್ಭಿಣಿ ಆಗಿರುವುದು ಸವಾಲೇ ಸರಿ. ತನ್ನ  ಭಾವನೆಗಳನ್ನು ನಿಯಂತ್ರಿಸುವ ಹಾರ್ಮೋನ್ ಗಳು ಏರುಪೇರಾಗಿ, ಗರ್ಭಿಣಿ ಹೆಂಗಸು ಒಳ್ಳೆ ಎಳಸು ಪ್ರಾಯದ ಹುಡುಗಿಯಂತೆ ಆಡಬಹದು. ಚಿತ್ತ ಚಂಚಲೆಯಾಗಿ, ದೈಹಿಕ ನೋವನ್ನು ಅನುಭವಿಸುತ್ತಾ, ಹಾಗು ಇನ್ನಿತರೇ ಕಷ್ಟಗಳನ್ನ ಎದುರಿಸಬೇಕಾಗುತ್ತದೆ.

ಇಂತ ಸಮಯದಲ್ಲಿ ಪತಿಯಾಗಿ ಮಾಡಬಹುದಾಗಿರುವುದು ಅಬ್ಬಬ್ಬಾ ಅಂದರೆ ಪತ್ನಿ ಜೊತೆಗೆ ಈ ಕಾಲವನ್ನು ಸಾಗಿಹಾಕುವುದು. ಏಕೆ?

ಇಂತಹ ಸಮಯದಲ್ಲಿ ಪತ್ನಿಗೆ ಎಂದಿಗಿಂತ ಜಾಸ್ತಿ ಪತಿಯ ಸಾಂಗತ್ಯ  ಏಕೆ ಬೇಕು ಅನ್ನೋದಿಕ್ಕೆ 7 ಕಾರಣಗಳು ಇಲ್ಲಿವೆ :

೧. ಮಾನಸಿಕ ಬೆಂಬಲಕ್ಕಾಗಿ ಅವಳಿಗೆ ಓರ್ವ ಗೆಳೆಯ ಬೇಕು   

ಗರ್ಭಧಾರಣೆಯ ಸಮಯದಲ್ಲಿ ಹಾರ್ಮೋನ್ ಗಳ ಗತಿಯಲ್ಲಿ ವಿಪರೀತ ಏರುಪೇರು ಆಗುತ್ತದೆ. ಇದರಿಂದ ಮಾನಸಿಕ ಸಂತುಲನ ಅಸ್ತವ್ಯಸ್ತ ಆಗುತ್ತದೆ. ಒಂದು ಕ್ಷಣ ಅವಳು ಗೋಳಿಡುವ ಶ್ರುತಿಯಂತೆ ಆಡಿದರೆ, ಇನ್ನೊಮ್ಮೆ ಗಲಾಟೆ ಮಾಡೋ ಮಾಲಾಶ್ರೀ ಆಗಬಹುದು, ನೆಲದ ಮೇಲೆ ಬಿದ್ದಿರೋ ಯಾವ್ದೋ ಬಟ್ಟೆಯನ್ನ ನೋಡಿಯೂ ಅವ್ಳು ಚಂಡಿಯಂತೆ ಆಡಬಹುದು. ಪತಿಯು ಇದರಿಂದ ಇರಿಸುಮುರಿಸಿಗೆ ಒಳಗಾಗದೆ, ಇದು ಸಹಜವೆಂದು ಭಾವಿಸಬೇಕು. ಬೇರೇ ಏನು ಬೇಡ, ಆಕೆಯೊಂದಿಗೆ ಕೂತು, ಅವಳ ಮಾತುಗಳನ್ನು ಆಲಿಸಿದರೆ ಸಾಕು. ವಿಷ್ಯ ಏನೇ ಇರಲಿ, ಅವಳೊಂದಿಗೆ ಸುಮ್ಮನೆ ಕೂತು ನಾಲ್ಕು ಮಾತನಾಡಿದರೆ ಅವಳ ದಿನ ಕೂಡ ಖುಷಿಯಿಂದ ತುಂಬಿರುತ್ತದೆ.

೨. ಅವಳಿಗೆ ದೈಹಿಕ ಬೆಂಬಲವಾಗಿ ನಿಲ್ಲುವವನು ಬೇಕು

ಗರ್ಭಧಾರಣೆ ಸಮಯ ತುಂಬಾ ಒತ್ತಡ ಹಾಗು ನೋವಿನಿಂದ ತುಂಬಿರುತ್ತದೆ. ಅಂಗಮರ್ದನ (ಮಸಾಜ್) ಮಾಡುವುದರಿಂದ ಅವಳಿಗೆ ಎಷ್ಟೋ ನಿರಾಳವೆನಿಸುತ್ತದೆ. ಹಾಗು ಅವಳ ಕೈಯಲ್ಲಿ ಮೈ-ಕೈ ನೋವಾಗುವಂತಹ ಯಾವುದೇ ಕೆಲಸಗಳನ್ನು ಮಾಡಿಸಬಾರಾದು. ತುಂಬಾ ಕೆಲಸದದಷ್ಟೇ ಅಪಾಯಕಾರಿ ತುಂಬಾ ಕಮ್ಮಿ ಕೆಲಸಗಳನ್ನು ಮಾಡುವುದು. ಕೆಲವೊಂದು ಬಾರಿ ಅಡುಗೆ ಮಾಡುವಾಗ ಅಡುಗೆಯ ವಾಸನೆಯಿಂದ ಆಕೆಗೆ ವಾಂತಿಯಾಗುವಂತೆ ಭಾಸವಾಗಬಹುದು, ಇದನ್ನು ಅರ್ಥ ಮಾಡಿಕೊಂಡು ಪತಿಯು ತನ್ನ ಪತ್ನಿಗೆ ಸ್ವಲ್ಪ ವಿಶ್ರಾಂತಿ ನೀಡಿ, ಅಡುಗೆ ಕೆಲಸ ಹಾಗು ಮನೆಕೆಲಸಗಳಲ್ಲಿ ಮುತುವರ್ಜಿ ವಹಿಸಿದರೆ ತುಂಬಾ ಒಳ್ಳೆಯದು.

೩. ಆಕೆಗೆ ಆಸರೆಯಾಗಿ ಯಾರಾದರು ಬೇಕು

ಮಾನಸಿಕವಾಗಿ ಹಾಗು ದೈಹಿಕವಾಗಿ ಅವಳಿಗೆ ಬೆಂಬಲವಾಗಿ ನಿಲ್ಲುವವರು ಯಾರಾದರು ಬೇಕೇ ಬೇಕು. ಸಲಹೆಗಳನ್ನ ನೀಡಲಿಕ್ಕೆ, ಅವಳ ಪ್ರಶ್ನೆಗಳಿಗೆ ಉತ್ತರಿಸುವುದಕ್ಕೆ, ಮುಖ್ಯವಾದ ನಿರ್ಧಾರಗಳನ್ನು ತೆಗೆದುಕೊಳ್ಳೋದಕ್ಕೆ, ವೈದ್ಯರ ಬಳಿ ಹೋಗುವುದಕ್ಕೆ, ತನ್ನ ಭಯಗಳನ್ನು ಹಂಚಿಕೊಳ್ಳೋಕೆ, ಅವರಳಿಗೆ ಯಾರಾದರು ಒಬ್ಬರು ಆಸರೆಯಾಗಬೇಕು. ಮಗುವಾದ ನಂತರ ಅವಳ ಜೀವನ ಸಂಪೂರ್ಣವಾಗಿ ಬದಲಾಗುತ್ತದೆ. ಅವಳ ಗರ್ಭಧಾರಣೆಯ ಮೊದಲ ದಿನದಿಂದಲೇ ಅವಳ ಬದುಕನ್ನು ಮಗು ಆವರಿಸುತ್ತದೆ. ಇಂತಹ ತಾಯ್ತನಕ್ಕೆ ಕಾಲಿಡುವಾಗ, ಆಕೆಗೆ ಆಸರೆಯಾಗಿ ಯಾರದರು ಇರಲೇ ಬೇಕು.

೪. ಆರೋಗ್ಯಕರ ಗರ್ಭಧಾರಣೆಗಾಗಿ

ಗರ್ಭಧಾರಣೆಯ ವೇಳೆ ಆರೋಗ್ಯ ಕಾಪಾಡಿಕೊಳ್ಳುವುದು ತುಂಬಾ ಅವಶ್ಯಕ. ಮಗುವಿನ ಹಾಗು ತಾಯಿಯ ಆರೋಗ್ಯಕ್ಕೆ ಮೊದಲ ಪ್ರಾಮುಖ್ಯತೆ. ದೈಹಿಕ ಆರೋಗ್ಯಕ್ಕೆ ಪೋಷಕರು ಹಾಗು ಮುಖ್ಯಾವಾಗಿ ಪತಿಯು ಪತ್ನಿಯ ಬಗ್ಗೆ ಕಾಳಜಿವಹಿಸಬೇಕಾಗುತ್ತದೆ. ಅವಳು ಸದಾ ನಿಮ್ಮ ಗಮನವನ್ನು ಬಯಸುತ್ತಾಳೆ. ಅವಳ ಪ್ರತಿಯೊಂದು ಬಯಕೆಗಳು ಪೂರೈಸಬೇಕು ಹಾಗು ಅವಳಿಗೆ ಒಳ್ಳೆಯ, ಬಯಸಿದ ಆಹಾರವನ್ನು ನೀಡಬೇಕು. ಹಾಗು ಗರ್ಭಿಣಿಯನ್ನು ಕಡೆ ಪಕ್ಷ ತಿಂಗಳಿಗೆ ಒಮ್ಮೆಯಾದರು ವೈದ್ಯರ ಬಳಿ ಕರೆದೊಯ್ಯಬೇಕು.

೫. ಆರೋಗ್ಯಕರ ಮಗುವಿಗಾಗಿ

ಮಗುವಿನ ಆರೋಗ್ಯ ತಾಯಿಯ ಆರೋಗ್ಯದ ಮೇಲೆ ಅವಲಂಬಿತವಾಗಿರುತ್ತದೆ. ತಾಯಿಯ ಆರೋಗ್ಯ ಕಾಪಾಡುವುದು ಪತಿಯ ಜವಾಬ್ದಾರಿ. ಪತ್ನಿಯ ಕಾಳಜಿ ಸದಾ ವಹಿಸುವುದು ಹಾಗು ಆಕೆಗೆ ಅತ್ಯುತ್ತಮ ವೈದ್ಯಕೀಯ ಸೌಲಭ್ಯ ಪೂರೈಸುವುದು ಪತಿಯ ಕೆಲಸ. ಅವಳ ಪ್ರತಿಯೊಂದು ಬೇಡಿಕೆಗಳನ್ನ ಈಡೇರಿಸಲು ಅವಳ ಜೊತೆಯಲ್ಲಿರಬೇಕು (ಕೆಲವೊಮ್ಮೆ ಎಂದಿಗಿಂತ ಜಾಸ್ತಿ). ಇದು ಮಗುವಿನ ಒಳ್ಳೆ ಆರೋಗ್ಯಕ್ಕೆ ಮಾಡಲೇ ಬೇಕು.

೬. ೯ ತಿಂಗಳು ಅಂದರೆ ತಮಾಷೇನೆ ಅಲ್ಲ

ಗಂಟಲಲ್ಲಿ ಚಿಕ್ಕ ಅಡಿಕೆ ತುಂಡು ಸಿಲುಕಿಕೊಂಡರೆ ಸುಧಾರಿಸಿಕೊಳ್ಳಲು ಅರ್ಧ ಘಂಟೆ ತೆಗೆದುಕೊಳ್ಳುತ್ತೇವೆ, ಅಂತದರಲ್ಲಿ ಒಂಬತ್ತು ತಿಂಗಳು ಮಗುವನ್ನು ಹೊಟ್ಟೆಯೊಳಗೆ ಕಾಪಾಡಿಕೊಳ್ಳುವುದು ತಮಾಷೇನೆ ಅಲ್ಲ! ಎಲ್ಲಾ ಬದಲಾವಣೆಗಳ ಜೊತೆಗೆ ಏಗುತ್ತಾ ತನ್ನ ಮನಸ್ಥಿತಿಯಲ್ಲಿನ ಏರುಪೇರುಗಳನ್ನು ನಿಭಾಯಿಸುತ್ತಾ, ಒಂಬತ್ತು ತಿಂಗಳು ಕಳೆಯುವುದು ತುಂಬಾ ಕಠಿಣ. ಈ ಸಮಯದಲ್ಲಿ ಪತಿಯಾಗಿ ಕಡೆ ಪಕ್ಷ ಮಾಡಬಹುದಾದಂತ ಕೆಲಸವೆಂದರೆ, ಅದು ಪತ್ನಿಯ ಸನಿಹ ಇರುವುದು.ಅವಳೊಂದಿಗೆ ಮಾತಾಡುವುದು, ಸಣ್ಣಪುಟ್ಟ ಕೆಲಸಗಳನ್ನು ಅವಳಿಗಾಗಿ ಮಾಡಿಕೊಡುವುದು ಹಾಗು ಇನ್ನಿತರೆ ಕಾರ್ಯಗಳನ್ನು ಪತಿ ಮಾಡಬೇಕು.

೭. ಏಕೆಂದರೆ ಅದು ಕೇವಲ “ಅವಳ” ಮಗುವಲ್ಲ

ಗರ್ಭಧಾರಣೆಯ ಸಮಯದಲ್ಲಿ ಪತ್ನಿಯೊಂದಿಗೆ ಏಕೆ ಪತಿ ಇರಬೇಕೆಂದರೆ, ಅದಕ್ಕೆ ಮುಖ್ಯ ಕಾರಣ ಅಂದರೆ ಅದು ಆಕೆಯ ಗರ್ಭದಲ್ಲಿ ಇರುವ ಮಗು ಕೇವಲ ಅವಳದ್ದಲ್ಲ, ಅದು ಅವರಿಬ್ಬರದು ಅರ್ಥಾತ್ ಆ ಮಗು ಪತಿ ಹಾಗು ಪತ್ನಿ ಇಬ್ಬರದು. ಕೇವಲ ಆಕೆಯು ಮಗುವನ್ನು ಹೊತ್ತುಕೊಂಡಿದ್ದಾಳೆ ಎಂದ ಮಾತ್ರಕ್ಕೆ, ಅದರ ಎಲ್ಲ ಪರಿಣಾಮಗಳನ್ನು ಆಕೆಯೇ ಅನುಭವಿಸಬೇಕು ಎಂದು ಅರ್ಥವಲ್ಲ. ಅವಳ ಗರ್ಭಧಾರಣೆಯಲ್ಲಿ ಅವಳ ಪತಿಯು ಸಹ ಸಹಭಾಗಿಯಾಗಿದ್ದು, ಅವಳಿಗೆ ಬೆಂಬಲವಾಗಿ ನಿಲ್ಲಬೇಕು.    

Click here for the best in baby advice
What do you think?
100%
Wow!
0%
Like
0%
Not bad
0%
What?
scroll up icon